ತದಿಗೆ ಗೌರಿ ಪೂಜೆಯೂ ಚೈತ್ರ ಶುದ್ಧ ತೃತೀಯ, ಚೈತ್ರ ಶುದ್ಧ ಬಹುಳ ಹಾಗು ವೈಶಾಖ ಶುದ್ಧ ತೃತೀಯ ದಂದು ಆಚರಣೆ ಮಾಡುವರು . ಈ ವರುಷ ಜಯ ನಾಮ ಸಂವತ್ಸರದಲ್ಲಿ ಏಪ್ರಿಲ್ ೨ನೇ ತಾರೀಖು ೨೦೧೪ ಮೊದಲನೇ ತದಿಗೆ,ಏಪ್ರಿಲ್ ೧೭ ನೇ ತಾರೀಖು ತದಿಗೆ ಹಾಗೂ ಮೇ ೨ನೇ ತಾರೀಖು ಕೊನೆಯ ತದಿಗೆ ಅಂದರೆ ಅಕ್ಷಯ ತದಿಗೆ/ತೃತೀಯ . (ಈ ಮೇಲ್ಕಂಡ ತಾರೀಖುಗಳು ಆ ಆ ಪ್ರಾಂತ್ಯದ ಪಂಚಾಂಗವನ್ನು ಆಧರಿಸಿ ಆಚರಣೆ ಮಾಡಬೇಕು ) ಈ ದಿನದಂದು ಮದುವೆಯಾದ ಸುವಾಸಿನಿಯರು ಪ್ರಾತಃ ಕಾಲದಲ್ಲಿ ಎದ್ದು ತಮ್ಮ ನಿತ್ಯ ಕಾರ್ಯಗಳನ್ನು ನಿರ್ವಹಿಸಿ ನಂತರ ಅರಿಶಿನದಿಂದ ಗೌರಿಯನ್ನು ತಯಾರಿಸಿ ಅದನ್ನು ಎರಡು ವೀಳ್ಯದೆಲೆಯನ್ನು ಬೆಲ್ಲದಚ್ಚು ಮೇಲೆ ಸ್ಥಾಪಿಸಿ ಜೊತೆಗೆ ಎರಡು ಬಟ್ಳಡಿಕೆ ,ಬಳೆಬಿಚ್ಚೋಲೆ ,ಕನ್ನಡಿ ,ಒಂದು ಪುಟ್ಟ ಕಳಸ ಅದಕ್ಕೆ ೫ ವೀಳ್ಯದೆಲೆ ,ನೀರು,ಅರಿಶಿನ ,ಕುಂಕುಮ, ಹೂವು,ಮಂತ್ರಾಕ್ಷತೆ, ಹಾಗು ಕಳಸಕ್ಕೆ ಸುಣ್ಣ. ಒಂದು ತಟ್ಟೆಯಲ್ಲಿ ಸ್ವಲ್ಪ ಅಕ್ಕಿ ಹಾಕಿ ಅದರ ಮೇಲೆ ಕಳಸವನ್ನು ಸ್ಥಾಪನೆ ಮಾಡಬೇಕು . ಇವಿಷ್ಟು ಬೇಕಾದ ಪದಾರ್ಥಗಳು (ಕೆಲವರ ಮನೆಯಲ್ಲಿ ಎರಡು ಅರಿಶಿನಿದ ಗೌರಿಯನ್ನು ಮಾಡುವ ಪದ್ಧತಿ ಇರುತ್ತೆ ಹಾಗಾಗಿ ತಮ್ಮ ತಮ್ಮ ಸಂಪ್ರದಾಯದಂತೆ ಹಾಗು ಗುರು ಹಿರಿಯರಲ್ಲಿ ಕೇಳಿ ಆಚರಣೆ ಮಾಡಬೇಕು. )
ತದಿಗೆ ಗೌರಿಯನ್ನು ಸ್ಥಾಪಿಸಿ ,ಆವಾಹನೆ ಮಾಡಿ ಪೂಜಿಸಬೇಕು . ನೈವೇದ್ಯಕ್ಕಾಗಿ ಭಕ್ಷ್ಯಗಳು, ಪಾಯಸ ,ಹಣ್ಣುಗಳು,ಪಾನಕ ,ಕೋಸಂಬರಿ ತಮ್ಮ ತಮ್ಮ ಕೈಲಾದಂತೆ ಯಾವುದಾದರೂ ಮಾಡಿ ನೈವೇದ್ಯ ಮಾಡಿ ,ಹಾಗು ೫ ಜನ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಸೇವಿಸಲು ಪಾನಕ ಕೋಸಂಬರಿ ಕೊಡಬೇಕು . ನಂತರ ಅನುಕೂಲ ಇರುವವರು ಮುತ್ತೈದೆಯರಿಗೆ ಭೋಜನಕ್ಕೆ ಆಹ್ವಾನಿಸಿ ಅವರ ಶಕ್ತ್ಯಾನುಸಾರ ಬಾಗಿನ ಕೊಡಬಹುದು .