Pages

Sunday, August 4, 2013

Aditya Hrudayam Meaning In Kannada


                                                                 




ಆದಿತ್ಯ ಗಾಯತ್ರಿ

ಓಂ ಭಾಸ್ಕರಾಯ  ವಿದ್ಮಹೇ ಮಹದ್ದ್ಯುತಿಕರಾಯ  ಧೀಮಹಿ । ತನ್ನೋ ಆದಿತ್ಯಃ  ಪ್ರಚೋದಯಾತ್ ।।


ಆದಿತ್ಯ ದೇವತಾ ಮಂತ್ರಃ 


ಘೃಣಿಸ್ಸೂರ್ಯ  ಆದಿತ್ಯೋ   ನ  ಪ್ರಭಾವಾತ್ಯಕ್ಷರಮ್ । ಮಧುಕ್ಷರಂತಿ   ತದ್ರಸಮ್ । ಸತ್ಯಂ ವೈ  ತದ್ರಸಮಾಪೋ  ಜ್ಯೋತೀ
 ರಸೋsಮೃತಂ  ಬ್ರಹ್ಮ  ಭೂರ್ಭುವಸ್ಸುರೋಹಮ್ ।।


 ಮುನ್ನುಡಿ 

 ಸೂರ್ಯದೇವನ  ಸ್ತುತಿಯಾದ  ಆದಿತ್ಯಹೃದಯವು  ಅಗಸ್ತ್ಯ ಮುನಿಗಳ  ಕೃತಿಯೆಂದು  ಪ್ರಸಿದ್ಧ . ಇದು ವಾಲ್ಮೀಕಿ ರಾಮಾಯಣದ  ಯುದ್ಧಕಾಂಡದಲ್ಲಿ ಬರುವುದು .
            
                               ಮೊದಲನೆಯ ಎರೆಡು  ಶ್ಲೋಕಗಳು  ಈ ಸ್ತೋತ್ರವು ಶ್ರೀಮಾರನಿಗೆ  ಅರ್ಪಿತವಾದಾಗಿನ ಸನ್ನಿವೇಶವನ್ನು ವರ್ಣಿಸುತ್ತವೆ . ರಾವಣನ ಸಾರಥಿಯು  ತನ್ನೊಡೆಯನ  ಪ್ರಾಣ ರಕ್ಷಣೆಗಾಗಿ  ರಥವನ್ನು  ರಣರಂಗದಿಂದ ದೂರ  ಒಯ್ದ ಕಾರಣ, ಶ್ರೀ ರಾಮ  ರಾವಣರ ಸಂಗ್ರಾಮದಲ್ಲಿ  ಅನಿರೀಕ್ಷಿತ  ವಿರಾಮ ಒದಗಿತ್ತು . ಆಗ  ಮನುಷ್ಯ ಮಾತ್ರನಿಂದ ಜಯಸಲಸಾಧ್ಯನಾದ ಪ್ರಬಲ  ರಾವಣನ ಸಂಹಾರದ ಪರಿಯನ್ನು  ಕುರಿತು ಆಲೋಚನ  ರತನಾಗಿದ್ದ  ಶ್ರೀರಾಮಚಂದ್ರ , ದೇವತೆಗಳಿಂದಲೂ  ಅಜೇಯನಾಗುವ  ವರವನ್ನು  ಬೇರೆ ಪಡೆದಿದ್ದ  ರಾವಣ . ಶ್ರೀರಾಮನಿಗೆ  ತನ್ನ ದೈವತ್ವದ  ಅರಿವಿದ್ದರೂ , ತನ್ನ ಅವತರಣದ  ಕಾರ್ಯಸಿದ್ಧಿಗಾಗಿ  ಮನುಷ್ಯತ್ವದ  ಮೇಲೆ  ಒತ್ತು ನೀಡಿ  ದುಷ್ಟಸಂಹಾರವನ್ನು  ಮಾಡಬೇಕಿತ್ತು .

                              ಇಂತಹ ದ್ವಂದ್ವದಲ್ಲಿ  ಸಿಲುಕಿದ  ಶ್ರೀರಾಮನಿಗೆ  ಈ ಸ್ತೋತ್ರದ ಮೂಲಕ  ವೇದಾಂತದ ತತ್ತ್ವವಾದ  "ಜೀವೋ ಬ್ರಹ್ಮೈವ  ನಾಪರಃ " 'ಜೀವಾತ್ಮನೂ  ಪರಮಾತ್ಮನೂ  ಒಂದೇ , ಬೇರೆಯಲ್ಲ 'ಎಂಬುದನ್ನು  ಅಗಸ್ತ್ಯ ಮಹರ್ಷಿಗಳು
ಉಪದೇಶಿಸಿದರು . ಮನುಷ್ಯಸಾಮಾನ್ಯರ  ವಿಷಯದಲ್ಲಿ  ಹೇಳುವುದಾದರೆ ,ಅವರು ದೈವತ್ವಕ್ಕೆ ಏರುತ್ತಾರೆ ; ಅದೇ  ಅವತಾರ ಪುರುಷರ  ಬಗ್ಗೆ ಹೇಳುವುದಾದರೆ  ಅವರು ಮಾನವತ್ವಕ್ಕೆ  ಇಳಿದು ಬರುತ್ತಾರೆ .

                              ಆದಿತ್ಯ  ಹೃದಯದ ೩-೫  ಶ್ಲೋಕಗಳು  ಉದ್ದೇಶ ಮತ್ತು ಫಲದಲ್ಲಿ  ಗಾಯತ್ರೀಮಂತ್ರಕ್ಕೆ  ಸಮವಾದರೂ  ಆರಧಿಸಬೇಕಾದ  ಆ ದಿವ್ಯ ಪ್ರಭೆಯ  (ವರೇಣ್ಯಂ ಭರ್ಗಃ ) ವರ್ಣನೆಯಲ್ಲಿ  ವಿಸ್ತೃತವಾಗಿದೆ . ಜ್ಞಾನಿಗಳಾದ ಅಗಸ್ತ್ಯ  ಮುನಿಗಳಿಗೆ  ಶ್ರೀರಾಮ ,ಭಗವಾನ್ ವಿಷ್ಣುವಿನ ಅವತಾರವೆಂಬುವದರಲ್ಲಿ  ಸಂಶಯವಿರಲಿಲ್ಲ . ಸಾಧಾರಣ ಮನುಷ್ಯರಿಗೆ  ಗುರುವು ಗಾಯತ್ರೀ  ಮಂತ್ರೋಪದೇಶವನ್ನು  ಮಾಡುವಂತೆ  ಶ್ರೀರಾಮನಿಗೆ  ಸನಾತನವೂ  ಗುಹ್ಯವೂ  ಆದ ಆದಿತ್ಯ  ಹೃದಯವನ್ನು  ಉಪದೇಶಿಸಲಾಯಿತು . ತನ್ನ  ದೈವತ್ವದ  ಅರಿವಿದ್ದ  ಶ್ರೀರಾಮನು  ಮನುಷ್ಯರಿಗೆ  ಸಾಧಕ ಮತ್ತು ಸಾಧ್ಯ (ಪರಬ್ರಹ್ಮ )ಗಳ  ಅಭೇದವನ್ನು  ತಿಳಿಸಲು  ಇಚ್ಛಿಸಿದ . ಶ್ರದ್ಧಾನ್ವಿತರಾಗಿ  ಈ ಸ್ತೋತ್ರವನ್ನು  ಪಠಿಸಿದಾಗ  ಸಾಧನಾಪಥದಲ್ಲಿ  ಬರುವ  ಅಡೆತಡೆಗಳೆಲ್ಲ  ಪರಿಹಾರವಾಗಿ  ಇಷ್ಟ  ಪ್ರಾಪ್ತಿಯಾಗುವುದು .

                              ಪರಬ್ರಹ್ಮನಲ್ಲಿ  ಐಖ್ಯವಾಗುವ  ಭಗವಂತನ ವಿವಿಧ  ರೂಪಗಳ  ವರ್ಣನೆಯನ್ನು ೬-೧೪  ಶ್ಲೋಕಗಳಲ್ಲಿ ಹೇಳಲಾಗಿದೆ . ೧೬-೨೧  ಶ್ಲೋಕಗಳಲ್ಲಿರುವ  ನಮನಗಳು  ಸ್ಥೂಲ  ಮತ್ತು ಸೂಕ್ಷ್ಮ ರೂಪಗಳು  ಒಂದಾಗುವುದನ್ನು  ಸೂಚಿಸುತ್ತವೆ . ಹೀಗೆ ಶ್ರೀರಾಮನಿಗೆ  ೨೬ ಮತ್ತೆ ೨೭ನೆಯ  ಶ್ಲೋಕಗಳಲ್ಲಿ  ನೀಡಿರುವ  ಆದಿತ್ಯಧ್ಯಾನವನ್ನು   ಕುರಿತ ಉಪದೇಶವು 'ತತ್  ತ್ವಂ ಅಸಿ ' ಮಹಾವಾಕ್ಯದ  ಅನುಭೂತಿಯತ್ತ ಕರದೊಯ್ಯುತ್ತದೆ .

                              ಒಟ್ಟಿನಲ್ಲಿ ಆದಿತ್ಯನು  ತನ್ನ ಮಾನವ ಪ್ರತಿರೂಪಿ  ಶ್ರೀರಾಮನಿಗೆ ಉದ್ದೇಶ್ಯವನ್ನು  ತ್ವರಿತವಾಗಿ  ಪೂರೈಸಿ  ಎಲ್ಲರಿಗೂ  ಆನಂದವನ್ನುಂಟು  ಮಾಡುವಂತೆ  ಕೊನೆಯ ಶ್ಲೋಕದಲ್ಲಿ ಪ್ರೇರೇಪಿಸುತ್ತಾನೆ .

                              ಹೆಚ್ಚು ಜನರು  ಈ ಸ್ತೋತ್ರವನ್ನು  ಶ್ರದ್ಧಾಭಕ್ತಿಗಳಿಂದ  ಪಠಿಸಿ  ತನ್ಮೂಲಕ  ಪರಬ್ರಹ್ಮನಲ್ಲಿ  ಐಖ್ಯವಾಗುವ  ಪಥದಲ್ಲಿ  ಮುಂದೆ ಸಾಗಲಿ .


                                              ಆದಿತ್ಯ ಹೃದಯ

ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ || 1 ||
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಾಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ || 2 ||

೧-೨. ದೇವತೆಗಳೊಡನೆ  ಯುದ್ಧವನ್ನು ವೀಕ್ಷಿಸಲು  ಬಂದಿದ್ದ ಭಗವಾನ್ ಅಗಸ್ತ್ಯ  ಋಷಿಗಳು  ಯುದ್ಧದಲ್ಲಿ ದಣಿದಿದ್ದ , ಮುಂದೆ ಯುದ್ಧ ಸನ್ನದ್ಧನಾಗಿ  ನಿಂತಿರುವ  ರಾವಣನನ್ನು ಕಂಡು ಚಿಂತಿತನಾಗಿದ್ದ ರಾಮನನ್ನು ಕಂಡು ಇಂತೆಂದರು :

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || 3 ||

೩.  ಎಲೈ ರಾಮನೇ ,ಮಹಾಬಾಹುವೇ  ,ಯಾವುದರಿಂದ ನೀನು  ಯುದ್ಧದಲ್ಲಿ  ಎಲ್ಲ  ಶತ್ರುಗಳನ್ನು  ಜಯಸುತ್ತಿಯೋ  ಆ ಸನಾತನ  ರಹಸ್ಯವನ್ನು  ಕೇಳು.

ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್ |
ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ  ಶುಭಮ್ || 4 ||

೪. ಆದಿತ್ಯ ಹೃದಯವೆಂಬ  ಈ ಮಹಾಸ್ತುತಿಯನ್ನು  ನಿತ್ಯವೂ  ಪಠಿಸಿದರೆ  ನಿನ್ನ ಎಲ್ಲ ಶತ್ರುಗಳೂ  ನಾಶವಾಗುತ್ತಾರೆ , ನಿನಗೆ ಜಯ ಲಭಿಸುವುದು  ಮತ್ತು  ಅಕ್ಷಯವಾದ ಪರಮ  ಮಂಗಳವುಂಟಾಗುವುದು .

ಸರ್ವಮಂಗಳ ಮಾಂಗಳ್ಯಂ ಸರ್ವ ಪಾಪ ಪ್ರಣಾಶನಮ್ |
ಚಿಂತಾಶೋಕ ಪ್ರಶಮನಮ್ ಆಯುರ್ವರ್ಧನ ಮುತ್ತಮಮ್ || 5 ||

೫. ಇದು ಎಲ್ಲ ಮಂಗಳಕ್ಕೂ  ಮಂಗಳಕರವಾದುದು , ಎಲ್ಲ ಪಾಪಗಳನ್ನು  ನಾಶ ಮಾಡುವಂತಹುದು ,ಚಿಂತೆ - ಶೋಕಗಳನ್ನು
ಪರಿಹರಿಸಿವಂತಹುದು  ಮತ್ತು ದೀರ್ಘಾಯಸ್ಸನ್ನು  ನೀಡುವಂತಹುದು .

ರಶ್ಮಿಮಂತಂ  ಸಮುದ್ಯಂತಂ  ದೇವಾಸುರ  ನಮಸ್ಕೃತಂ |
ಪೂಜಯಸ್ವ  ವಿವಸ್ವಂತಮ್  ಭಾಸ್ಕರಂ ಭುವನೇಶ್ವರಮ್ || ೬||


೬. ದೇವಾಸುರರಿಂದ ನಮಸ್ಕರಿಸಲ್ಪಡುವ , ರಶ್ಮಿಗಳಿಂದ  ಕೂಡಿದ ,ತನ್ನ ಪ್ರಭೆಯಿಂದ ಬೇರೆ ಬೆಳಗುವ  ವಸ್ತುಗಳನ್ನು  ಕಳೆಗುಂದಿಸುವ , ಜಗತ್ತಿಗೆ ಒಡೆಯನಾದ , ಉದಯಸುತ್ತಿರುವ ಭಾಸ್ಕರನನ್ನು  ಪೂಜಿಸು .

 ಸರ್ವದೇವಾತ್ಮಕೋ  ಹ್ಯೇಷಃ  ತೇಜಸ್ವೀ  ರಶ್ಮಿಭಾವನಃ   |
 ಏಷ ದೇವಾಸುರಗಣಾಂಲ್ಲೋಕಾನ್  ಪಾತಿ  ಗಭಸ್ತಿಗಭಸ್ತಿಭಿಃ   || ||

೭.  ಅವನು ಎಲ್ಲ ದೇವತೆಗಳನ್ನೂ  ಪ್ರತಿನಿಧಿಸುತ್ತಾನೆ . ಅವನು ತೇಜಸ್ವಿ ಮತ್ತು  ತನ್ನ ಕಿರಣಗಳಿಂದ  ಎಲ್ಲರನ್ನು ಪೋಷಿಸುತ್ತಿರುವನು . ಅವನು ತನ್ನ ಶಕ್ತಿಯುತ  ಕಿರಣಗಳಿಂದ ದೇವಾಸುರರನ್ನೂ  ಲೋಕಗಳನ್ನೂ  ರಕ್ಷಿಸುತ್ತಿರುವನು .

ಏಷ  ಬ್ರಹ್ಮಾ   ಚ ವಿಷ್ಣುಶ್ಚ  ಶಿವಃ ಸ್ಕಂದಃ  ಪ್ರಜಾಪತಿಃ   |
 ಮಹೇಂದ್ರೋ  ಧನದಃ  ಕಾಲೋ  ಯಮಃ  ಸೋಮೋ  ಹ್ಯಪಾಂ ಪತಿಃ   || ೮ ||

೮. ಅವನೇ ಬ್ರಹ್ಮ ,ವಿಷ್ಣು , ಶಿವ ,ದೇವಸೇನಾಪತಿ  ಸ್ಕಂದ , ಪ್ರಜಾಪತಿ  ಮತ್ತು ಮಹೇಂದ್ರ , ಕುಬೇರನೂ  ಅವನೇ .  ಅವನೇ  ಕಾಲ ಮತ್ತು  ಯಮ .  ಸೋಮ ಮತ್ತು ವರುಣರು  ಅವನೇ .

ಪಿತರೋ ವಸವಃ  ಸಾಧ್ಯಾ  ಹ್ಯಶ್ವಿನೌ  ಮರುತೋ  ಮನುಃ   |
 ವಾಯುರ್ವಹ್ನಿಃ  ಪ್ರಜಾಪ್ರಾಣಃ  ಋತುಕರ್ತಾ  ಪ್ರಭಾಕರಃ  ||೯||

೯.  ಅವನೇ  ಪಿತೃಗಳು , ಅಷ್ಟವಸುಗಳೂ  ಅವನೇ , ಸಾಧ್ಯರೂ ಅಶ್ವಿನೀ  ದೇವತೆಗಳೂ   ಮರುದ್ಗಣಗಳೂ  ಮತ್ತು  ಮನುವೂ ಅವನೇ . ಅವನೇ ವಾಯು ಮತ್ತು ಅಗ್ನಿ . ಎಲ್ಲರ ಪ್ರಾಣಶಕ್ತಿಯೂ ಅವನೇ.  ಆರು  ಋತುಗಳನ್ನು ಉಂಟುಮಾಡುವ  ಪ್ರಭಾಕರನೂ  ಅವನೇ .

ಆದಿತ್ಯಃ  ಸವಿತಾ  ಸೂರ್ಯಃ ಖಗಃ ಪೂಷಾ  ಗಭಸ್ತಿಮಾನ್   |
ಸುವರ್ಣಸದ್ರುಶೋ  ಭಾನುರ್ಹಿರಣ್ಯರೇತಾ  ದಿವಾಕರಃ   ||೧೦||


೧೦. ಅವನೇ ಅದಿತಿಪುತ್ರ ,ವಿಶ್ವಕರ್ತಾ ,ಕ್ರಿಯೋತ್ತೇಜಕ ,ಆಕಾಶದಲ್ಲಿ ಚಲಿಸುವವನು ,ಪೋಷಕನು ,ಎಲ್ಲ ದಿಕ್ಕುಗಳನ್ನು  ಬೆಳಗುವವನು ,ಸ್ವರ್ಣಮಯ ಪ್ರಭೆಯುಳ್ಳವನು , ವಿಶ್ವೋತ್ಪ್ಪತ್ತಿಯ ಬೀಜ  ಮತ್ತು ಹಗಲನ್ನು  ಉಂಟು ಮಾಡುವವನು .


ಹರಿದಶ್ವಃ ಸಹಸ್ರಾರ್ಚಿಃ  ಸಪ್ತಸಪ್ತಿರ್ಮರೀಚಿಮಾನ್  
ತಿಮಿರೋನ್ಮಥನಃ  ಶಂಭುಸ್ತ್ವಷ್ಟಾ   ಮಾರ್ತಾಂಡ  ಅಂಶುಮಾನ್  ||೧೧||

೧೧. ಅವನು ಹಸಿರು ಕುದುರೆಗಳುಳ್ಳವನು  (ಸರ್ವವ್ಯಾಪಿ ),ಅಸಂಖ್ಯ  ಕಿರಣಗಳುಳ್ಳವನು ,ಏಳು  ಇಂದ್ರಿಯಗಳ  (ಎರೆಡು  ಕಣ್ಣು , ಎರೆಡು  ಕಿವಿ ,ಎರೆಡು  ಮೂಗು  ಮತ್ತು ಒಂದು ನಾಲಿಗೆ ) ಶಕ್ತಿ ,ಕತ್ತಲೆಯನ್ನು  ಹೋಗಲಾಡಿಸುವವನು ,ಸಂತೋಷವನ್ನುಂಟು  ಮಾಡುವವನು ,ಭಕ್ತರ ಅಶುಭವನ್ನು ಹೋಗಲಾಡಿಸುವವನು ,ನಿರ್ಜೀವ
ಜಗದಂಡಕ್ಕೆ   ಪ್ರಾಣದಾಯಕನು ಮತ್ತು ಕಿರಣಗಳಿಂದ  ಕೂಡಿರುವವನು .

ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋ‌உದಿತೇಃ ಪುತ್ರಃ ಶಂಖಃ ಶಿಶಿರನಾಶನಃ || ೧೨ ||

 ೧೨.  ಅವನೇ ಹಿರಣ್ಯಗರ್ಭನು ,ಶೀತಲನೂ  ತಪಿಸುವವನೂ ಅವನೇ, ಉಜ್ವಲ  ಕಿರಣಗಳುಳ್ಳ  ರವಿಯೂ  ಅವನೇ .ಒಳಗೆ
ಅಗ್ನಿಯನ್ನು  ಧರಿಸಿದ ಅದಿತಿ ಪುತ್ರನು ಅವನು .ಅತ್ಯಂತ  ಶುಭಾದಾಯಕನೂ  ಜಡತೆಯನ್ನು ನಾಶಮಾಡುವವನೂ  ಅವನು .

ವ್ಯೋಮನಾಥ ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ |
ಘನಾವೃಷ್ಟಿ ರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ || ೧೩||


೧೩. ಅವನು ಆಕಾಶಕ್ಕೆ  ಒಡೆಯನು ,ತಮಸ್ಸನ್ನು  ಹೋಗಲಾಡಿಸುವವನು ,ಋಕ್ -ಯಜಸ್-ಸಾಮವೇದಗಳಲ್ಲಿ ಪಾರಂಗತನಾದವನು,  ಮಳೆಯನ್ನು  ಸುರಿಸುವವನು,ನೀರಿನ ಮಿತ್ರನು  ಮತ್ತು ವಿಂಧ್ಯಪರ್ವತ  ಶ್ರೇಣಿಯನ್ನು  ದಾಟಿದವನು .

ಆತಪೀ ಮಂಡಲೀ ಮೃತ್ಯುಃ ಪಿಂಗಳಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ || ೧೪ ||


೧೪. ಅವನು ಯಾವಾಗಲೂ  ಸೃಷ್ಟಿಕ್ರಿಯೆಯಲ್ಲಿ  ನಿರತನಾದವನು (ಬ್ರಹ್ಮಾ ),ಮಂಡಲಾಕಾರನು (ಕೌಸ್ತುಭದಿಂದ  ಶೋಭಿಸುವ  ವಿಷ್ಣು ), ಮತ್ತು ಎಲ್ಲವನ್ನೂ  ನಾಶ ಮಾಡುವವನು  (ಶಿವ ). ಅವನು ಪಿಂಗಳವರ್ಣವುಳ್ಳವನು ( ಉದಯಿಸುವ ಸೂರ್ಯ ), ಮತ್ತು ಎಲ್ಲವನ್ನೂ ತಪಿಸುವವನು . ಅವನೇ ಕ್ರಾಂತದರ್ಶಿ ,ವಿಶ್ವಸ್ವರೂಪ ,ಮಹಾತೇಜನು ,ಎಲ್ಲಾರಿಗೂ  ಪ್ರಿಯನಾದವನು  ಮತ್ತು ಎಲ್ಲ ಕ್ರಿಯೆಗಳನ್ನೂ  ಹುಟ್ಟಿಸುವವನು .

ನಕ್ಷತ್ರ ಗ್ರಹ ತಾರಾಣಾಮ್ ಅಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋ‌உಸ್ತು ತೇ || ೧೫||

೧೫.  ನಕ್ಷತ್ರಗ್ರಹ ತಾರಾಗಣಗಳಿಗೆ   ಅವನು ಅಧಿಪನು  ಮತ್ತು  ವಿಶ್ವ್ದಲ್ಲಿರುವುದಕ್ಕೆಲ್ಲಾ  ಮೂಲಪುರುಷನು . ಎಲ್ಲ ತೇಜಸ್ಸುಗಳಿಗೆ  ಅವನೇ ಮೂಲ ತೇಜಸ್ಸು . ದ್ವಾದಶರೂಪದಲ್ಲಿ  ಆವಿರ್ಭವಿಸಿರುವ  ನಿನಗೆ ನಮಸ್ಕಾರ .

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || ೧೬||

೧೬. ಪೂರ್ವಾಚಲದೇವತೆಗೆ ನಮಸ್ಕಾರ , ಪಶ್ಚಿಮಾಚಲದೇವತೆಗೆ  ನಮಸ್ಕಾರ, ಜ್ಯೋತಿರ್ಗಣಗಳ  ಒಡೆಯನಿಗೂ  ಹಗಲಿನ ಒಡೆಯನಿಗು  ನಮಸ್ಕಾರ .

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ || ೧೭ ||

೧೭. ಜಯವನ್ನುಂಟು  ಮಾಡುವವನಿಗೂ  ಐಶ್ವರ್ಯಪ್ರದನಿಗೂ  ಹಳದಿ ಕುದುರೆಯುಳ್ಳವನಿಗೂ ನಮಸ್ಕಾರ ,ಅಸಂಖ್ಯ ಕಿರಣಗಳುಳ್ಳ  ಆದಿತ್ಯನಿಗೆ  ನಮಸ್ಕಾರ .

ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ || ೧೮ ||

೧೮. ಉಗ್ರನಿಗೂ ,ವೀರನಿಗೂ , ವೇಗವಾಗಿ ಚಲಿಸುವವನಿಗೂ ನಮಸ್ಕಾರ, ತಾವರೆಯನ್ನು ಅರಳಿಸುವವನಿಗೂ  ಮಾರ್ತಾಂಡನಿಗೂ  ನಮಸ್ಕಾರ .

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ || ೧೯ ||

೧೯. ಬ್ರಹ್ಮಾ ಶಿವ  ಅಚ್ಯುತರ ಒಡೆಯನಿಗೂ ,ಸೂರ್ಯನಿಗೂ ,ಎಲ್ಲವನ್ನೂ  ಬೆಳಗುವ ಮತ್ತು ಎಲ್ಲವನ್ನೂ  ಭಕ್ಷಿಸುವ  ಆದಿತ್ಯವರ್ಚಸ್ಸಿಗೂ  ಮತ್ತು  ಭಯಂಕರ  ಶರೀರವುಳ್ಳವನಿಗೂ  ನಮಸ್ಕಾರ .

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || ೨೦ ||

೨೦. ತಮೋನಾಶಕನಿಗೂ,ಹಿಮನಾಶಕನಿಗೂ , ಶತ್ರುನಾಶಕನಿಗೂ ,ಅನಂತಾತ್ಮನಿಗೂ ,ಕೃತಘ್ನರನ್ನು ನಾಶ ಮಾಡುವವನಿಗೂ  ,ದೇವನಿಗೂ  ಮತ್ತು ಜ್ಯೋತಿಗಳ ಒಡೆಯನಿಗೂ  ನಮಸ್ಕಾರ .

ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋ‌உಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ || ೨೧ ||

೨೧. ಕರಗಿದ ಚಿನ್ನದಂತೆ  ಬೆಳಗುತ್ತಿರುವವನಿಗೂ , ಅಗ್ನಿಸ್ವರೂಪನಿಗೂ ,ವಿಶ್ವಕರ್ಮನಿಗೂ  ಕತ್ತಲೆಯನ್ನು  ನಾಶಮಾಡುವವನಿಗೂ ವಿಶ್ವಸಾಕ್ಷಿಯಾದ ಜ್ಯೋತಿರ್ಮಯನಿಗೂ  ನಮಸ್ಕಾರ .

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || ೨೨ ||

೨೨. ಅವನೇ ಎಲ್ಲವನ್ನೂ  ನಾಶಮಾದುತ್ತಾನೆ , ಮತ್ತೆ ಅವನೇ ಎಲ್ಲವನ್ನೂ  ಪುನಃ ಸೃಷ್ಟಿಸುತ್ತಾನೆ . ಅವನೇ ತನ್ನ ಕಿರಣಗಳ ಮೂಲಕ ನೀರನ್ನು  ಸೆಳದುಕೊಂಡು ,ಅದನ್ನು ಬಿಸಿಮಾಡಿ ( ಮೋಡವಾಗಿ ಪರಿವರ್ತಿಸಿ) ಮಳೆಯ ರೂಪದಲ್ಲಿ   ಸುರಿಸುವನು .

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ || ೨೩ ||

೨೩.  ಅವನು ಎಲ್ಲರ ಹೃದಯದಲ್ಲಿ ನೆಲಸಿದ್ದು  ಎಲ್ಲರೂ  ನಿದ್ರಿಸಿರುವಾಗ  ಅವನು ಎಚ್ಚರದಲ್ಲಿರುತ್ತಾನೆ .ಅವನೇ ಅಗ್ನಿಹೋತ್ರ
ಮತ್ತು ಅಗ್ನಿಹೊತ್ರಿಗಳಿಗೆ ದೊರೆಯುವ ಫಲವೂ  ಅವನೇ .

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ || ೨೪ ||


೨೪. ಅವನೇ ವೇದಗಳಾಗಿರುವನು . ಎಲ್ಲ ಕರ್ಮಗಳೂ  ಮತ್ತು ಕರ್ಮಫಲವೂ  ಅವನೇ ಆಗಿರುವನು . ಪ್ರಪಂಚದಲ್ಲಿರುವ ಎಲ್ಲಾ  ಕೃತ್ಯಗಳಿಗೂ ಈ ರವಿಯೇ ಒಡೆಯ .


                                                          ಫಲಶೃತಿ 


ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿತ್ -ನಾವಶೀದತಿ ರಾಘವ || ೨೫ ||

 ೨೫. ಎಲೈ ರಾಘವನೇ, ಕಷ್ಟ ಕಾಲದಲ್ಲಿ ,ಸಂಕಟ ಪರಿಸ್ಥಿತಿಯಲ್ಲಿ ,ಅರಣ್ಯ ಮಧ್ಯದಲ್ಲಿ ಸಿಕ್ಕಿಕೊಂಡು  ಭಯಗೊಂಡಿರುವಾಗ ಮನುಷ್ಯನು ಈ  ಸ್ತೋತ್ರವನ್ನು ಪಠಿಸಿದರೆ  ಅವನು ದುಃಖಕೀಡಾಗುವುದಿಲ್ಲಾ .

ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ || ೨೬ ||

೨೬.  ದೇವದೇವನಾದ  ಜಗತ್ಪತಿಯಾದ  ಇವನನ್ನು ಪೂಜಿಸು . ಮೂರು ಬಾರಿ ಈ ಸ್ತೋತ್ರವನ್ನು ಜಪಿಸಿದರೆ  ಯುಧ್ಧದಲ್ಲಿ  ನೀನು  ಜಯಶಾಲಿಯಾಗುತ್ತಿಯಾ .

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್ || ೨೭ ||

೨೭. ಎಲೈ ಮಹಾಬಾಹುವೇ, ಇದೇ  ಕ್ಷಣದಲ್ಲಿ ನೀನು ರಾವಣನನ್ನು   ಕೊಲ್ಲುತ್ತೀಯ - ಹೀಗೆ ಹೇಳಿ ಅಗಸ್ತ್ಯನು ಎಲ್ಲಿಂದ ಬಂದನೋ ಅಲ್ಲಿಗೆ ಹಿಂದಿರುಗಿದನು .

ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋ‌உಭವತ್-ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || ೨೮ ||

೨೮. ಇದನ್ನು ಕೇಳಿ ಮಹಾತೇಜಸ್ವಿಯಾದ ರಾಘವನು ನಿಶ್ಚಿಂತನಾದನು . ಪುನಃ ಚೇತರಿಸಿಕೊಂಡು ಅತ್ಯುತ್ಸಾಹದಿಂದ  ಸುಪ್ರೀತನಾದನು .

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ || ೨೯ ||

೨೯. ಆದಿತ್ಯನನ್ನೇ  ನೋಡುತ್ತ  ಜಪವನ್ನು ಮಾಡಿ  ರಾಘವನು ಅತ್ಯಂತ ಹರ್ಷಗೊಂಡನು . ಮೂರು ಬಾರಿ ಆಚಮನ ಮಾಡಿ ಶುಚಿಯಾಗಿ  ವೀರ್ಯವಂತನಾದ ಅವನು ಧನುಸ್ಸನ್ನು ಎತ್ತಿಕೊಂಡನು .

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋ‌உಭವತ್ || ೩೦ ||

೩೦. ರಾವಣನನ್ನು ನೋಡಿ ಸಂತೋಷದಿಂದ  ಯುದ್ಧಕ್ಕೆ ಮುಂದೆ ಬಂದನು . ಅವನನ್ನು ವಧಿಸುವ  ನಿರ್ಧಾರದಿಂದ ಸರ್ವಯತ್ನದಲ್ಲಿ ತೊಡಗಿದನು .


ಅಧ ರವಿರವದನ್-ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ || ೩೧ ||

೩೧.  ರಾಕ್ಷಸಾಧಿಪನ ನಾಶವು  ಸನ್ನಿಹಿತವಾಗಿರುವದನ್ನು  ತಿಳಿದುಕೊಂಡು  ಸುರಗಣಮಧ್ಯದಲ್ಲಿದ್ದ  ಸೂರ್ಯನು ಆನಂದದಿಂದ ರಾಮನನ್ನು  ನೋಡುತ್ತಾ ಸಂತೋಷಚಿತ್ತನಾಗಿ  'ತ್ವರೆಮಾಡು ' ಎಂದು  ಅವನಿಗೆ ಹೇಳಿದನು .

 ಇತ್ಯಾರ್ಷೇ  ಶ್ರೀಮದ್ರಾಮಾಯಣೇ  ವಾಲ್ಮೀಕಿ  ವಿರಚಿತ ಆದಿಕಾವ್ಯೇ  ಯುದ್ಧಕಾಂಡೇ  ಆದಿತ್ಯಹೃದಯಂ  ನಾಮ  ಸಪ್ತೋತ್ತರ ಶತತಮಃ  ಸರ್ಗಃ ಸಂಪೂರ್ಣಂ ।।

30 comments :

  1. Thanks for sharing this beautiful meaning

    ReplyDelete
  2. Thanks a lot for sharing the meaning

    ReplyDelete
  3. Is there any particular time , day and procedure for starting to chanting and all?

    ReplyDelete
  4. NAMASTHE..
    Thanks for such a great work..

    ReplyDelete
  5. ಧನ್ಯವಾದಗಳು

    ReplyDelete
  6. sir what's benefits of reading this stotram

    ReplyDelete
  7. Thank you for helping us understand the meaning. Good work. But I have a suggestion. Please correct the typing error "Srimaara" in the second paragraph under munnudi.
    Also, in the 4th para, all the other websites say "akshayam paramam SHIVAM". Here is it mentioned "Shubham". Please let us know which is the correct one to use.

    ReplyDelete
  8. THANK YOU VERY MUCH, TUMBAA CHENNAGIDE

    ReplyDelete
  9. This comment has been removed by the author.

    ReplyDelete
  10. ಅನಂತ ವಂದನೆಗಳು

    ReplyDelete
  11. ಧನ್ಯವಾದಗಳು, ಆದಿತ್ಯ ಹೃದಯದ ಅರ್ಥ ತುಂಬಾ ಸರಳವಾಗಿ ವಿವರಿಸುತ್ತೀರಿ.

    ReplyDelete