ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ
ಬಾಲನ ಕಂಡೀರಾ ಬಲವಂತನ ಕಂಡೀರಾ।।
ಅಂಜನೆಯುದರದಿ ಪುಟ್ಟಿತು ಕೂಸು
ರಾಮನ ಚರಣಕ್ಕೆರಗಿತು ಕೂಸು
ಸೀತೆಗೆ ಉಂಗುರ ಕೊಟ್ಟಿತು ಕೂಸು
ಲಂಕಾ ಪುರವನೇ ಸುಟ್ಟಿತು ಕೂಸು ।।೧।।
ಬಂಡಿ ಅನ್ನವನುಂಡೀತು ಕೂಸು
ಬಕ್ಕನ ಪ್ರಾಣವಕೊಂದಿತು ಕೂಸು
ವಿಷದಲಡ್ಡುಗೆ ಮೆದ್ದಿತು ಕೂಸು
ಮಡದಿಗೆ ಪುಷ್ಪವ ಕೊಟ್ಟಿತು ಕೂಸು ।।೨।।
ಮಾಯಾವಾದಿಗಳ ಗೆದ್ದಿತು ಕೂಸು
ದ್ವೈತಮತವನು ಉದ್ಧರಿಸಿತು ಕೂಸು
ಮಧ್ವರಾಯನೆಂಬೊ ಪೆಸರಿನ ಕೂಸು
ಪುರಂದರ ವಿಠಲನ ಪ್ರೇಮದ ಕೂಸು ।।೩।।
My son's favourite song
ReplyDelete