Pages

Tuesday, August 13, 2013

Eesha Ninna Charana Bhajane

                                       ಶ್ರೀ ಕನಕದಾಸ ವಿರಚಿತ ಕೇಶವನಾಮ


ರಾಗ : ಮೋಹನ



ಈಶ ನಿನ್ನ ಚರಣ ಭಜನೆ  ಆಸೆಯಿಂದ ಮಾಡುವೆನು।
ದೋಷ ನಾಶ ಮಾಡಿಬಿಡೋ  ಶ್ರೀಶ ಕೇಶವ ।।                 [ಪ]


ಶರಣು ಹೊಕ್ಕೆನಯ್ಯ  ಎನ್ನ ಮರಣಸಮಯದಲ್ಲಿ  ನಿನ್ನ।
ಚರಣ ಸ್ಮರಣೆ  ಕರುಣಿಸಯ್ಯ  ನಾರಾಯಣ ।।                       [೧]

ಶೋಧಿಸೆನ್ನ  ಭವದ  ಕಲುಷ  ಭೋಧಿಸಯ್ಯ  ಜ್ಞಾನವೆನಗೆ
ಬಾಧಿಸುವ  ಯಮನ  ಭಾಧೆ  ಬಿಡಿಸು  ಮಾಧವ ।।                 [೨]


ಹಿಂದನೇಕ  ಯೋನಿಗಳಲಿ  ಬಂದು ಬಂದು  ನೊಂದೆ  ನಾನು ।
ಇಂದು ಭವದಬಂಧ  ಬಿಡಿಸು  ತಂದೆ  ಗೋವಿಂದ।।                  [೩]


ಭ್ರಷ್ಟನೆನಿಸಬೇಡ  ಕೃಷ್ಣ ಇಷ್ಟು  ಮಾತ್ರ ಬೇಡಿಕೊಂಬೆ ।
ಶಿಷ್ಟರೊಡನೆ  ಇತ್ತು ಕಷ್ಟ  ಬಿಡಿಸು  ವಿಷ್ಣುವೆ ।।                          [೪]


ಮೊದಲು ನಿನ್ನ  ಪಾದಪೂಜೆ  ಮುದದಿ ಮಾಡುವೆನೈ  ನಾನು ।
ಹೃದಯದೊಳಗೆ  ಹುದುಗಿಸಯ್ಯ    ಮಧುಸೂಧನ ।।                 [೫]


ಕವಿದುಕೊಂಡು  ಇರುವ ಪಾಪ  ಸವೆದುಪೋಗುವಂತೆ  ನಾನು ।
ಜವನಭಾಧೆಯನ್ನು ಬಿಡಿಸು ತ್ರಿವಿಕ್ರಮ ।।                                 [೬]


ಕಾಮಜನಕ ನಿನ್ನ ನಾಮ  ಪ್ರೇಮದಿಂದ ಪಾಡುವಂಥ ।
ನೇಮವೆನಗೆ  ಪಾಲಿಸಯ್ಯ  ಸ್ವಾಮಿ  ವಾಮನ ।।                       [೭]


ಮದನನಯ್ಯ  ನಿನ್ನ ಮಹಿಮೆ ವದನದಲ್ಲಿ  ಒದಗುವಂತೆ ।
ಹೃದಯದಲ್ಲಿ ಸದನ ಮಾಡು   ಮುದದಿ ಶ್ರೀಧರ ।।                     [೮]


ಹುಸಿಯನಾಡಿ ಹೊಟ್ಟೆ  ಹೊರೆವ  ವಿಷಯದಲ್ಲಿ ರಸಿಕನೆಂದು ।
ಹುಸಿಗೆ ನೀನು ಹಾಕದಿರೋ  ಹೃಶಿಕೇಷನೇ ।।                          [೯]


ಅಬ್ಧಿಯೊಳಗೆ  ಬಿದ್ದು ನಾನು ಒದ್ದುಕೊಂಬೆನಯ್ಯ  ಭವದಿ ।
ಗೆದ್ದು ಪೋಪ ಬುದ್ಧಿತೋರೋ   ಪದ್ಮನಾಭನೆ ।।                        [೧೦]


ಕಾಮ  ಕ್ರೋಧ   ಬಿಡಿಸಿ    ನಿನ್ನ  ನಾಮ  ಜಿಹ್ವೆಯೊಳಗೆ  ನುಡಿಸು ।
ಶ್ರೀಮಹಾನುಭಾವನಾದ  ದಾಮೋದರ ।।                                 [೧೧]


ಪಂಕಜಾಕ್ಷ ಎನ್ನ ಮಂಕುಬುದ್ಧಿ  ಬಿಡಿಸಿ ನಿನ್ನ ।
ಕಿಂಕರನ್ನ ಮಾಡಿಕೊಳ್ಳೋ  ಸಂಕರುಷಣ ।।                                 [೧೨]      


ಏಸು  ಜನ್ಮ ಬಂದರೇನು  ದಾಸನಾಗಲಿಲ್ಲ ನಾನು ।
ಗಾಸಿ ಮಾಡದಿರು  ಇನ್ನು ವಾಸುದೇವನೇ ।।                                [೧೩]


ಬುದ್ಧಿಶೂನ್ಯನಾಗಿ  ನಾನು ಕದ್ದುಕಳ್ಳನಾದೆ  ಎನ್ನ ।
ತಿದ್ದಿ ಹೃದಯ ಶುದ್ಧ ಮಾಡೋ  ಪ್ರದುಮ್ಯನೇ ।।                             [೧೪]


ಜನನಿ ಜನಕ ನೀನೆಯೆಂದು  ಎನುವೆನಯ್ಯ  ದೀನಬಂಧು ।
ಎನಗೆ ಮುಕ್ತಿ ಪಾಲಿಸಿಂದು   ಅನಿರುದ್ಧನೇ ।।                                  [೧೫]


ಹರುಷದಿಂದ  ನಿನ್ನ ನಾಮ  ಸ್ಮರಿಸುವಂತೆ  ಮಾಡು ಪ್ರೇಮ ।
ಇರಿಸು  ನಿನ್ನ ಚರಣದಲ್ಲಿ  ಪುರುಷೋತ್ತಮ ।।                                  [೧೬]


ಸಾಧುಸಂಘ  ಕೊಟ್ಟು  ನಿನ್ನ  ಪಾದಭಜಕನೆನಿಸು  ಎನ್ನ ।
ಭೇದ ಮಾಡಿ  ನೋಡದಿರು  ಹೇ ಅಧೋಕ್ಷಜ ।।                                 [೧೭]


ಚಾರುಚರಣ ತೋರಿ  ಎನಗೆ  ಪಾರುಗಾಣಿಸಯ್ಯ  ಕೊನೆಗೆ ।
ಭಾರ ಹಾಕಿರುವೆ  ನಿನಗೆ ನಾರಸಿಂಹನೆ ।।                                        [೧೮]


ಸಂಚಿತಾರ್ಥ  ಪಾಪಗಳನು  ಕಿಂಚಿತಾರ್ಥದಿಲ್ಲದಂತೆ ।
ಮುಂಚಿತಾಗಿ  ಕಳೆಯಬೇಕು  ಸ್ವಾಮಿ ಅಚ್ಯುತ ।।                                [೧೯]


ಜ್ಞಾನಭಕ್ತಿ  ಕೊಟ್ಟು  ನಿನ್ನ ಧ್ಯಾನದಲ್ಲಿ  ಇತ್ತು ಎನ್ನ ।
ಹೀನಬುದ್ಧಿ  ಬಿಡಿಸೋ  ಮುನ್ನ ಜನಾರ್ಧನ ।।                                     [೨೦]


ಜಪತಪಾನುಷ್ಟಾನ  ನೀನು ಒಪ್ಪುವಂತೆ ಮಾಡಲಿಲ್ಲ ।
ತಪ್ಪು ಕೋಟಿ  ಕ್ಷಮಿಸಬೇಕು  ಉಪೇಂದ್ರನೇ ।।                                     [೨೧]


ಮೊರೆಯ  ಇಡುವೆನಯ್ಯ  ನಿನಗೆ  ಸೆರೆಯ  ಬಿಡಿಸು  ಭವದ ಎನಗೆ ।
ಇರಿಸು ಭಕ್ತರೊಳಗೆ  ಪರಮ ಪುರುಷ  ಶ್ರೀಹರೆ ।।                                  [೨೨]


ಪುಟ್ಟಿಸಲೇ  ಬೇಡವಿನ್ನು  ಪುಟ್ಟಿಸಿದಕೆ  ಪಾಲಿಸಿನ್ನು ।
ಇಷ್ಟು ಮಾತ್ರ ಬೇಡಿಕೊಂಬೆ  ಶ್ರೀಕೃಷ್ಣನೆ ।।                                            [೨೩]


ಸತ್ಯವಾದ  ನಾಮಗಳನು  ನಿತ್ಯದಲ್ಲಿ ಪಠಿಸುವರಿಗೆ ।
ಅರ್ತಿಯಿಂದ  ಸಲಹುವ ಕರ್ತೃ   ಶ್ರೀ ಕೇಶವ ।।                                             [೨೪]


ಮರೆಯದೆಲೆ  ಹರಿಯನಾಮ  ಬರೆದು ಓದಿ ಕೇಳುವವರಿಗೆ ।
ಕರೆದು  ಮುಕ್ತಿ ಕೊಡುವ  ನೆಲೆಯಾದಿಕೇಶವ ।।                                        [೨೫]



 

No comments :

Post a Comment