ಬೇವು ಬೆಲ್ಲದೊಳಿಡಲೇನು ಫಲಾ !
ಹಾವಿಗೆ ಹಾಲೆರದರೇನು ಫಲಾ !
ಕುಟಿಲವ ಬಿಡದಿಹ ಕುಜನರು ಮಂತ್ರವ ,
ಪಠನೆಯ ಮಾಡಿದರೇನು ಫಲ!
ಸಟೆಯನ್ನಾಡುವ ಮನುಜರ ಮನದಲಿ,
ವಿಠಲನ ನೆನೆದರೆ ಏನು ಫಲಾ !
ಕಪಟತನದಿ ವಂಚಿಸುವ ಮನುಜರು ,
ಜಪಗಳ ಮಾಡಿದರೆ ಏನು ಫಲಾ !
ಕುಪಿತ ಬುದ್ಧಿಯನು ತ್ಯಜಿಸದೆ ನಿತ್ಯದಿ ,
ಉಪವಾಸ ಇದ್ದರೆ ಇನ್ನೇನು ಫಲಾ !
ಮಾತಾ - ಪಿತರನು ಬಳಲಿಸುವಾ ಮಗ ,
ಯಾತ್ರೆಯ ಮಾಡಿದರೇನು ಫಲಾ !
ಘಾತಕ ತನವನು ಬಿಡದೆ ನಿರಂತರ ,
ಗೀತೆಯನೋದಿದರೇನು ಫಲಾ !
ಪತಿಯನು ನಿಂದಿಸಿ ಬೊಗಳುವ ಸತಿಯರು ,
ವ್ರತಗಳ ಮಾಡಿದರೇನು ಫಲ !
ಅತಿಥಿಗಳ ಎಡೆಯಲಿ ಭೇದವ ಮಾಡುತ ,
ಗತಿಯನು ಬಯಸಿದರೆ ಏನು ಫಲಾ !
ಹೀನ ಕೃತ್ಯಗಳ ಮಾಡುತ ನದಿಯಲಿ ,
ಸ್ನಾನವ ಮಾಡಿದರೇನು ಫಲಾ !
ಶ್ರೀನಿಧಿ ಪುರಂದರ ವಿಠಲನ ನೆನೆಯದೆ ,
ಮೌನವ ಮಾಡಿದರೇನು ಫಲಾ !
Audio link Puttur Narsimhanayak
No comments :
Post a Comment