Pages

Monday, March 26, 2018

Dayavirali Damodara



ರಚನೆ : ಗೋಪಾಲದಾಸರು 

ರಾಗ : ಬಿಲಹರಿ 
ತಾಳ : ಝ೦ಪೇ  


ದಯವಿರಲಿ ದಯವಿರಲಿ ದಾಮೋದರ                      ।।ಪ॥
ಸಯವಾಗಿ ಬಿಡದೆನ್ನ ಸಾಕುವ ಶ್ರೀಕ್ರಷ್ಣ                     ।।ಅ.ಪ॥
ಹೋಗುವ ಹಾದಿಯಲ್ಲಿ  ಹೋದ ಹಾಗೆಲ್ಲ ನಾ 
ಸಾಗುವವ ನಾನಲ್ಲಾ   ನಿನ್ನ ಸ್ಮರಣೆಯ  ಬಿಟ್ಟು
ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೇ  ನಿಲುವಂತೆ 
ಹ್ಯಾಂಗೆ  ನಡೆಸುವಿ  ಹ್ಯಾಂಗೆ   ನಡಕೊಂಬೆ  ಸ್ವಾಮಿ            ।।೧।।



ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-
ಸಾಧ್ಯ ನಿನಗೆಂದು ನಾ ಬಂದವನಲ್ಲ
ನದ್ಯಾದಿ ಕ್ಷೇತ್ರಮೂರ್ತಿಗಳಲ್ಲಿ  ನಿಜ ಜ್ಞಾನ
ವೃದ್ಧ ಜನರ ಹುಡುಕಿ ನಿನ್ನ ತಿಳಿಯಲು ಬಂದೆ             ।।೨।।

ಸತತ ಇದ್ದಲ್ಲೆ ಎನ್ನ ಸಲಹೊ ಅವರೊಳಗಾಗಿ
ಅತಿಶಯವು ಉಂಟು ವಿಭೂತಿಯಲ್ಲಿ
ಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿ
ಸ್ಮೃತಿಗೆ ವಿಶೇಷ ಮಾರುತಿರಮಣ ನಿನ್ನ                    ।।೩।।

ನೋಡಿದೆನೆ ನಾ ನಿನ್ನ ನೋಡದೆ ಎಂದೆಂದು
ಪಾಡಿದೆನೆ ಆರಾರು ಪಾಡದೊಂದು
ಮಾಡಿದೆನೆ ಅರ್ಚನೆಯ ಮೀಸಲಾದುದು ಒಂದು
ಮೂಢಮತಿಯಲಿ ಮುಂದೆ ನಿಂದೆ ಕೈಮುಗಿದು            ।।೪।।

ಬಂದೆನೋ  ನಾನಿಲ್ಲಿ ಬಹುಜನ್ಮದ ಸುಕೃತ-
ದಿಂದ ನಿನ್ನಾ  ಬಳಿಗೆ ಇಂದಿರೇಶ
ಒಂದು ಮಾತ್ರವು ಬಿಟ್ಟು ಸಕಲವು ಅರ್ಪಿಸಿದೆ
ಬಂಧನವ  ಕಡಿವ  ಜ್ಞಾನ ಭಕುತಿಯ ಕೊಡು ಸ್ವಾಮಿ         ।।೫।।

ಬಿನ್ನಪವ ಕೇಳು ಸ್ವಾಮಿ ಎನ್ನನೊಬ್ಬನ್ನೇ  ಅಲ್ಲ
ಎನ್ನ ಹೊಂದಿ ನಡೆವ ವೈಷ್ಣವರನ್ನ
ಇನ್ನವರಿಗೆ ಬಾಹೋ  ದುಷ್ಕರ್ಮಗಳ ಕೆಡಿಸಿ
ಘನಗತಿಗೈದಿಸುವ ಭಕುತಿ ಕೊಡು ಕರುನಾಡಿ             ।।೬।।

ರಾಜರಾಜೇಶ್ವರ ರಾಜೀವದಳನಯನ
ಮೂಜಗದೊಡೆಯ ಮುಕುಂದಾನಂದ
ಈ ಜೀವಕೀ ದೇಹ ಬಂದದ್ದಕ್ಕು ಎನಗತಿ ನಿ
ರ್ವ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ              ।।೭।।
ಎನಗಾವುದು  ಒಲ್ಲೆ ಎಲ್ಲೆಲ್ಲಿ ಹೋದರು
ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನ ಕೊಡೋ  ಸ್ವಾಮಿ 
ಚಿನುಮಯ ಮೂರುತಿ ಗೋಪಾಲವಿಠಲ
ಘನಕರುಣಿ ಮಧ್ವಮುನಿ ಮನಮಂದಿರವಾಸ             ।।೮।।

No comments :

Post a Comment