ಮಂಗಳ ಪಾಡುತ ಮಂಗಳೇ ಲಕ್ಷ್ಮೀಗೆ ಆರತಿ ಬೆಳಗೋಣ
ಚಂದ್ರನ ಸೋದರಿ ಶ್ರೀ ಮಹಲಕ್ಷ್ಮೀಗೆ ಕೀರುತಿ ಪಾಡೋಣ ।
ಸಾಗೋರೋಧ್ಭವೇ ಆದಿಲಕ್ಷ್ಮೀಗೆ ಆರತಿ ಬೆಳಗೋಣ
ಹರಿಯ ರಾಣಿಗೆ ಅರಳಿದ ಮಲ್ಲಿಗೆ ಪಾದಕೆ ಇರಿಸೋಣ ।
ಭಾಗ್ಯವ ನೀಡುವ ವರಲಕ್ಷ್ಮೀ ತಾಯಿಯ ದಹಿಸುತಲಿ
ಈ ಭುವಿ ಬಾಳಿನ ನೋವನು ಕ್ಷಣದಲಿ ಮರೆಯೋಣ ।
ಲಕ್ಷ್ಮಿಯ ವ್ರತವ ಭಕ್ತಿಯಲಿ ತಪ್ಪದೆ ಮಾಡೋಣ
ತುಪ್ಪದ ಸಕ್ಕರೆ ಪಾಯಸವ ನೈವೇದ್ಯ ಇರಿಸೋಣ ।
ಆರತಿ ಬೆಳಗೋಣ ಮಂಗಳ ಆರತಿ ಬೆಳಗೋಣ ---- (೨)।।
ಅಷ್ಟಲಕ್ಷ್ಮಿಯ ರೂಪವನು ಮನದಲಿ ಸ್ಮರಿಸುತ್ತ
ಧನಧಾನ್ಯದ ಸಮೃದ್ಧಿಯ ಬಯಸಿ ಪ್ರಾರ್ಥನೆ ಸಲಿಸೋಣ ।
ದಿವ್ಯಶ್ಲೋಕಗಳ ನುತಿಸುತ್ತ ಪೂಜೆಯ ಮಾಡೋಣ
ಚಂದದ ರಾಣಿ ಇಂದಿರೆಗೆ ಆರತಿ ಬೆಳಗೋಣ ।
ಸುಂದರಿ ಸುಶೀಲೆ ಸುಮಂಗಳೆ ಕರುಣಿಸಿ ಹರಸುವಳು
ಲೋಭ-ಮೋಹ -ಅಹಂಕಾರವ ನಾಶವಗೈಯುವಳು ।
ಭಕ್ತಿಯ ಹೃದಯದ ಕಮಲವ ನೀಡಿ ಲಕುಮಿಯ ಬೇಡೋಣ
ಕೇಶವನ ಮನ ಮೋಹಿನಿಗೆ ಆರತಿ ಬೆಳಗೋಣ ।
ಆರತಿ ಬೆಳಗೋಣ ಮಂಗಳ ಆರತಿ ಬೆಳಗೋಣ---- (೨)।।
ಮನೆಬಾಗಿಲಿಗೆ ಅರಿಶಿನ ಕುಂಕುಮ ಚಂದದಿ ಸಿಂಗರಿಸಿ
ಲಕುಮಿಯ ಬೇಡುತ ಕರೆಯೋಣ ಗೋವನು ಮುಂದಿರಿಸಿ।
ಲಕ್ಷ್ಮಿಯ ಭಜಿಸಿ ಅಲಕ್ಷ್ಮಿಯ ಮನೆಯಿಂದ ಅಟ್ಟೋಣ
ವರಲಕ್ಷ್ಮಿದೇವಿ ಸರಳತೆ ನಾವು ಆರತಿ ಬೆಳಗೋಣ ।
ಸೌಂದರ್ಯ- ಸಂಪತ್ತು -ಸೌಭಾಗ್ಯ- ಸಮೃದ್ಧಿ -ಸದ್ಗುಣ- ಸಹನೆಯನು ....
ಸಂತೋಷ- ಕ್ಷಮೆಯ- ಲಜ್ಜೆ- ಶಾಂತಿಯಾ ವರಗಳ ಪಡೆಯೋಣ ।
ಶ್ರದ್ಧೆ- ಗಾಂಭೀರ್ಯ -ಯಶಸ್ಸು -ಕೀರ್ತಿ- ಪುಷ್ಟಿ - ವೃಷ್ಟಿಯನು
ಆರತಿ ಬೆಳಗುತ ಲಕ್ಷ್ಮಿಯ ಕರದಿ ಎಲ್ಲರು ಹೊಂದೋಣ ।
ಆರತಿ ಬೆಳಗೋಣ ಮಂಗಳ ಆರತಿ ಬೆಳಗೋಣ---- (೨)।।
ತಿರುಮಲೇಶನ ಮಡದಿಗೆ ಮಂಗಳ ಆರತಿ ಬೆಳಗೋಣ
ಕರುಣೆಯಿಂದಲಿ ಕಾಪಡುವವಳ ಪಾದಕೆ ನಮಿಸೋಣ ।
ಮಂಗಳಾಂಗಿಗೆ ಅಂಗನೆಯರೆಲ್ಲಾ ಸಿಂಗಾರ ಮಾಡೋಣ
ಪದುಮನಾಭನ ಮಡದಿಗೆ ಪದುಮದ ಆರತಿ ಬೆಳಗೋಣ ।
ತೆಂಗು - ಬಾಳೆ - ಫಲ -ತಾಂಬೂಲಾದಿ ಮಡಿಲನು ತುಂಬೋಣ
ಚಂದದ ದೇವಿಯ ದರುಶನದಿಂದ ಪುನೀತರಾಗೋಣ ।
ಸರಸ್ವತಿ ದೇವಿಯ ಅತ್ತೆಯ ಪಾದಕೆ ಶಿರವನು ಮಣಿಯೋಣ
ಮಂಗಳ ಗೀತೆಯ ಹಾಡುತ ಮಂಗಳ ಆರತಿ ಬೆಳಗೋಣ
ಆರತಿ ಬೆಳಗೋಣ ಮಂಗಳ ಆರತಿ ಬೆಳಗೋಣ ----(೨)।।
No comments :
Post a Comment